ಕಾಕಡ

ಮಲ್ಲಿಗೆ ಜಾತಿಗೆ ಸೇರಿದ, ಬಿಳಿ ಬಣ್ಣದ, ವಾಸನೆ ಇಲ್ಲದ ಹೂ ಬಿಡುವ ಸಸ್ಯ. ಇದನ್ನು ಉದ್ಯಾನವನಗಳಲ್ಲೂ ಮನೆಗಳಲ್ಲೂ ದೇವಸ್ಥಾನಗಳ ಬಳಿಯಲ್ಲೂ ಬೆಳೆಸುತ್ತಾರೆ. ಇದರ ಹೂವಿನಿಂದ ಹಾರ, ತುರಾಯಿ ಇತ್ಯಾದಿಗಳನ್ನು ಕಟ್ಟುವುದು ಒಂದು ಮುಖ್ಯವಾದ ಉದ್ಯಮವಾಗಿ ಬೆಳೆದಿದೆ. ಕಾಕಡಮೊಗ್ಗನ್ನು ಅರಳುವುದಕ್ಕೆ ಮುಂಚೆ ಕುಯ್ದು ಮಾರುಕಟ್ಟೆಗೆ ರವಾನಿಸುತ್ತಾರೆ.

 ಕಾಕಡ ಓಲಿಯೇಸೀ ಕುಟುಂಬದ ಜಾಸ್‍ಮಿನಮ್ ಪ್ಯೂಬಿಸೆನ್ಸ್ ಪ್ರಭೇದಕ್ಕೆ ಸೇರಿದೆ. ಇದು ಸುಮಾರು 3'-4' ಎತ್ತರ ಬೆಳೆಯುವ ನಿತ್ಯಹಸಿರಿನ ಬಹು ವಾರ್ಷಿಕ ಪೊದೆ ಸಸ್ಯ. ಇದರ ಎಳೆಯ ಕಾಂಡ ಮತ್ತು ಎಲೆಗಳ ಮೇಲೆ ತುಕ್ಕು ಬಣ್ಣದ ನವಿರಾದ ರೋಮಗಳಿವೆ. ಎಲೆಗಳು ಚಿಕ್ಕ ತೊಟ್ಟುಳ್ಳವು; ಇವುಗಳ ಆಕಾರ ಕರನೆಯಂತೆ; ಅಂಚು ನಯ, ತುದಿ ಮೊನಚು, ಬಣ್ಣ ಗಾಢ ಹಸಿರು. ಹೂ ಗೊಂಚಲು ಮಧ್ಯಾರಂಭಿ (ಸೈಮೋಸ್) ಮಾದರಿಯದು; ರೆಂಬೆಗಳ ತುದಿಯಲ್ಲಿ ಹುಟ್ಟುತ್ತದೆ. ಪುಷ್ಪಪತ್ರಗಳು 7, ಕೂಡಿಕೊಂಡಿವೆ. ಅವುಗಳ ಬಣ್ಣ ಬಿಳಿ. ಕೇಸರಗಳು 2, ಅಂಡಾಶಯ ಉಚ್ಚಸ್ಥಾನದ್ದು. ಕಾಕಡ ವಿಪುಲವಾಗಿ ಕವಲೊಡೆಯುತ್ತದೆ. ಈ ಕವಲುಗಳು ಬಾಗಿ, ನೆಲವನ್ನು ಮುಟ್ಟಿ. ಬೇರು ಬಿಟ್ಟು ಸ್ವತಂತ್ರ ಸಸಿಗಳಾಗುತ್ತವೆ. ಇಂಥ ಸಸಿಗಳಿಂದ ಕಾಕಡವನ್ನು ವೃದ್ಧಿ ಮಾಡಬಹುದು. ಸಸಿಗಳಿಗೆ ಕೊನೆಯ ಪಕ್ಷ ಎರಡು ತಿಂಗಳು ವಯಸ್ಸಾಗಿರಬೇಕು. ಸಸಿಗಳನ್ನು ತಾಯಿ. ಸಸ್ಯದಿಂದ ಬೇರ್ಪಡಿಸುವಾಗ ಅವುಗಳ ತಾಯಿಬೇರು ಕಿತ್ತುಹೋಗದಂತೆ ಎಚ್ಚರಿಕೆ ವಹಿಸಬೇಕು. ಕಾಕಡ ಬೇಸಾಯಕ್ಕೆ ಕೆಂಪು ಮರಳು ಮಿಶ್ರಿತ ಗೋಡುಮಣ್ಣು ಉತ್ತಮವಾದದ್ದು. ಆದರೆ ಜೌಗಿಲ್ಲದ ಫಲವತ್ತಾಗಿರುವ ಮತ್ತು ಸಡಿಲವಾಗಿರುವ ಬೇರೆ ಬಗೆಯ ಮಣ್ಣುಗಳಲ್ಲೂ ಇದರ ಬೇಸಾಯವನ್ನು ಮಾಡಬಹುದು. ಬೇಸಾಯ ಮಾಡುವ ಮೊದಲು ತೋಟವನ್ನು ಒಂದು ತಿಂಗಳು ಮುಂಚೆಯೇ ಚೆನ್ನಾಗಿ ಉಳುಮೆ ಅಥವಾ ಅಗತೆ ಮಾಡಿ ಸಿದ್ಧ ಮಾಡಬೇಕು. ಅನಂತರ 6' ಅಂತರದ ಸಾಲುಗಳಲ್ಲಿ 2' ಉದ್ದ 2' ಅಗಲ ಹಾಗೂ 1' ಆಳದ ಗುಂಡಿಗಳನ್ನು ತೋಡಬೇಕು. ಗುಂಡಿಗಳ ಪರಸ್ಪರ ದೂರ 5' ಇರಬೇಕು. ಗುಂಡಿಗಳಿಗೆ ಕೊಟ್ಟಿಗೆ ಗೊಬ್ಬರ, ಕೆಂಪು ಮಣ್ಣು ಮಿಶ್ರಮಾಡಿ ತುಂಬಿ ಅನಂತರ ಸಸಿಗಳನ್ನು ನಾಟಿ ಮಾಡಬೇಕು. ನಾಟಿ ಮಾಡಿದ ಒಂದು ವರ್ಷದ ಅನಂತರ ಗಿಡ ಹೂ ಬಿಡಲು ಪ್ರಾರಂಭಿಸುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಮತ್ತು ಚಳಿಗಾಲದ ಮುಕ್ತಾಯದಲ್ಲಿ ಕಾಕಡ ಬೆಳೆಗೆ ಮೇಲು ಗೊಬ್ಬರ ಕೊಡಬೇಕು. ಗೊಬ್ಬರ ಕೊಡುವುದಕ್ಕೆ ಮೊದಲು ಕಳೆ ತೆಗೆದು ಇಡೀ ತೋಟವನ್ನು ಮೇಲು ಅಗೆತಮಾಡಿ, ಸಸ್ಯಗಳ ಸುತ್ತಲು ಇರುವ ಮಣ್ಣನ್ನು ಪಕ್ಕಕ್ಕೆ ತೆಗೆದು, ಅನಂತರ ಗೊಬ್ಬರ ಕೊಟ್ಟು ವಿಶಾಲವಾಗಿ ಪಾತಿ ಮಾಡಬೇಕು. ಮಳೆಗಾಲದಲ್ಲಿ ನೀರಾವರಿ ಆವಶ್ಯಕತೆ ಇರುವುದಿಲ್ಲ. ಆದರೆ ಕಾಲಕಾಲಕ್ಕೆ ಅಗತ್ಯ ಬಿದ್ದಾಗ ನೀರು ಹಾಯಿಸುವುದರಿಂದ ಹೆಚ್ಚು ಇಳುವರಿ ಸಿಕ್ಕುತ್ತದೆ.

 ಚೆನ್ನಾಗಿ ಬೇಸಾಯ ಮಾಡಿದ ತೋಟದಲ್ಲಿ ಒಂದೊಂದು ಗಿಡವೂ ವರ್ಷಕ್ಕೆ 1ರಿಂದ 2ಕೆಜಿ. ಮೊಗ್ಗನ್ನು ಕೊಡುತ್ತದೆ.

 

(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ